ಹಿಂದಿ ಮತ್ತು ಪರಿಯೇರುಮ್ ಪೆರುಮಾಳ್

ಹಿಂದಿ ಅನ್ನೋ ಹೆಸರು ಬಹುಶಃ ಹೈಸ್ಕೂಲ್‌ಗೆ ಹೋದಮೇಲೆನೆ ಗೊತ್ತಾಗಿದ್ದು. ಎಂಟನೇ ಕ್ಲಾಸಿಂದ ನಮ್ಗೆ ಹಿಂದಿ ಅಆಇಈ ಶುರುವಾಯ್ತು. ಆ ರಿಟಯರ್ಡ್ ಹಂತದಲ್ಲಿದ್ದ ಟೀಚರ್ ಹೆಸರು ಮರೆತು ಹೋಗಿದೀನಿ. ಆದ್ರೆ ಅವರು ಯಾವಾಗಲೂ ಕುಡಿದುಕೊಂಡೆ ಬರೋರು. ನಮಗೆಲ್ಲಾ ಹಿಂದಿ ಕಲಿಯೋದರ ಜೊತೆ ಅವರ ಬಾಯಿಂದ ಬರುತ್ತಿದ್ದ ವಾಸನೆಯನ್ನೂ ಸಹಿಸಿಕೊಳ್ಳಬೇಕಿತ್ತು.‌ ದಿನ ಒಂದು ಪುಟಗಳಷ್ಟು ಹಿಂದಿ ಪಾಠ ಬರೆದುಕೊಂಡು ಬನ್ನಿ ಅಂತ ಹೋಮ್ ವರ್ಕ್ ಕೊಟ್ಟಿದ್ದರು. ಆ ಕುಡುಕ ಮೇಷ್ಟ್ರಿಗೆ ಗೊತ್ತಾಗಲ್ಲ ಅನ್ನೋ ಕಾನ್ಫಿಡೆನ್ಸಿಂದಾಗಿ ಇಂಗ್ಲಿಷ್ ಟೀಚರ್‌ಗಾಗಿ ಬರೆದಿದ್ದನ್ನ ಇಂಗ್ಲಿಷ್ ಟೀಚರ್ ಕ್ಲಾಸ್ ಮುಗಿದ ಮೇಲೆ ಅದನ್ನೆ ಈ ಕುಡಕ ಮೇಷ್ಟ್ರಿಗೆ ಇಂಗ್ಲಿಷಿನ ಅಕ್ಷರಗಳ ಮೇಲೆ ಪ್ರತಿ ಪದಕ್ಕೂ ಒಂದೊಂದು ಗೆರೆ ಎಳೆದು ತೋರಿಸಿ ತಪ್ಪಿಸಿಕೊಂಡಿದ್ದೇವು. ಆಗಾಗ ಬರ್ತಿದ್ದ ಆ ಮೇಷ್ಟ್ರಿಂದಾಗ ಹಿಂದಿ ಕಲಿತಿದ್ದು ಅಷ್ಟ್ರಲ್ಲೆ ಇತ್ತು. ಸೇಮ್ ತಮಿಳು ಸಿನಿಮಾ "ಪರಿತೇರುಮ್ ಪೇರುಮಾಳ್" ಥರ ಇಂಗ್ಲಿಷ್ ಟೀಚರ್ ಹೇಗೋ ನಮಗೆ ಹಿಂದಿ ಟೀಚರ್.

ಹೇಗೋ ಒಂಬತ್ತನೇ ಕ್ಲಾಸ್ ದಾಟಿದ್ವಿ. ಟೆಂತ್ ಬರೋದ್ರೊಳಗೆ ಹಿಂದಿ ಸರ್ ಬರೋದೆ ಕಡಿಮೆ ಆಗ್ಬಿಡ್ತು. ಬಂದ್ರು ಜಾಸ್ತಿ ಕುಡ್ದಿರೋರು. ಕೊನೆಗೊಂದು ದಿನ ರಾಜ್ ಕುಮಾರ್ ಕಿಡ್ನ್ಯಾಪ್ ಆಗಿತ್ತು‌ . ಅವತ್ತೆ ಅವ್ರು ಸತ್ತೂ ಹೋದ್ರೂ. ಇಡೀ ಶಾಲೆಯ ಹುಡುಗರೆಲ್ಲಾ ಅವರ ಮುಖ ನೋಡ್ಕೊಂಡು ಬಂದ್ವಿ. ಅಲ್ಲಿಗೆ ಒಂದು ಹಂತಕ್ಕೆ ಹಿಂದಿ ಕಲಿಕೆ ಸತ್ತಿತ್ತು.

ಹಿಂದಿ ಕಲಿಸೋಕೆ ಇನ್ನೊಬ್ಬ ಯುವಕ ಬಂದ ಅವ ಹಿಂದಿ ಬುಕ್ ಮಧ್ಯೆ ಕನ್ನಡದ ಅರ್ಥಗಳನ್ನ ಬರೆದುಕೊಂಡು ಬಂದು ನಮ್ಗೆ ಪಾಠ ಮಾಡೋನು.  ಆಗೆಲ್ಲಾ ಹಿಂದಿ ಕಲಿತರೆ ಬೇಗ ಸರ್ಕಾರಿ ಕೆಲಸ ಸಿಗುತ್ತೆ ಅಂತ ಮಾತಿತ್ತು.‌ ಅದನ್ನ ನಂಬಿಕೊಂಡೆ ಬಂದವ ಅಂವ. ಅಲ್ಲಿಗೆ ಎರಡನೇ ಹಂತದ ಹಿಂದಿ ಕಲಿಕೆ ಸತ್ತು ಹೋಯ್ತು. ಆತನನ್ನ ಶಾಲ ಸಿಬ್ಬಂದಿ ಮನೆಗೆ ಕಳ್ಸಿದ್ರು.

ಮೂರನೇ ಹಂತಕ್ಕೆ ಹಿಂದಿ ಕಲಿಸೋಕೆ ಬಂದಿದ್ದು ಒಬ್ಬ ಸುಂದರ ಹೆಣ್ಮಗಳು. ಕಲಿಸಿದ್ರೂ ಸಹ ಪಾಠ ಮುಗಿಸೋ ಅವಸರ. ಎಗ್ಸಾಮ್ ಹತ್ರ ಬರ್ತಿರೋ ಭಯ. ಅದರ ಜೊತೆ ಆಕೆಯ ಬಗ್ಗೆ ಇದ್ದ ಗಾಸಿಪ್‌ಗಳು ನಮ್ಗೆ ಹಿಂದಿ ದೂರ ಆಯ್ತು. ಅದು ಹೇಗೋ ಟೆಂತ್ ೫೫ ತಗೊಂಡು ಪಾಸ್ ಆದೆ.. ಒಂದಿಷ್ಟು ಹಿಂದಿ ಓದೋಕೆ ಬರ್ತಿದ್ರೂ. ಮಾತಾಡೋಕೆ ಕಷ್ಟವಿತ್ತು.

ಪಿಯುಸಿ ಕಾಮರ್ಸ್ ತಗೊಂಡೆ. ಸೋ ಅಲ್ಲಿ ಹಿಂದಿ ಇರ್ಲಿಲ್ಲ. ಡಿಗ್ರಿಲಿ ಆತ್ಮೀಯ ಗೆಳೆಯರಾದ ಪ್ರವೀಣ, ಮೋಹನ ಹಿಂದಿ ಆಪ್ಷನಲ್ ತಗೊಂಡ್ರು. (೭೦ ಜನರಲ್ಲಿ ಸುಮಾರ್ ಐದಾರು ಜನ ತಗೊಂಡಿದ್ರು) ನಾನೊಬ್ಬ ಮಾತ್ರ ಯಾಕೆ ಕನ್ನಡದಲ್ಲಿ ಇರೋದು ಗೆಳೆಯರ ಜೊತೆ ಇರೋಣ ಅಂತ ಹೋದೆ. ಆ ಮೇಡಮ್ ಪಾಠ ಓದಿ ಅಂದ್ರು. ಎರಡೂ ವರ್ಷಗಳ ನಂತರ ಹಿಂದಿ‌ ಓದ್ತಿರೋದ್ರಿಂದ ಕೂಡಿಸಿಕೊಂಡು ಓದೋದ್ರೊಳಗೆ ನಂಗೆ ಗೊತ್ತಾಗೋಯ್ತು. ಹಿಂದಿ ನಂಗೆ ಮರೆತು ಹೋಗಿದೆ. ಅನಕ್ಷರಸ್ಥರ ಥರ ಒಂದೊಂದೆ ಪದ ಜೋಡಿಸಿ ಓದ್ತಿದ್ದೆ.‌ ಆಗ್ಲೇ ಆ ಮೇಡಂಗೆ ಹೇಳಿ ಮೇಡಂ ನಂಗೆ ಕಷ್ಟ ಆಗ್ತಿದೆ. ಕನ್ನಡ ಕ್ಲಾಸ್‌ಗೆ ಹೋಗ್ತೀನಿ ಅಂತ ಎದ್ದು ಬಂದಿದ್ದೆ.‌ ಅಲ್ಲಿಗೆ ಸಂಪೂರ್ಣ ಹಿಂದಿ ಬರದೆ ಹೋಯ್ತು. ಹಿಂದಿಯಲ್ಲಿ expert ಇದ್ದ ಆ ಇಬ್ಬರು ಗೆಳೆಯರು ಆ ವರ್ಷ ಫೇಲ್ ಆಗಿದ್ರು. ನಾನು ಸೇಫು ಅಂದ್ಕೊಂಡೆ

ಈಗ ಅಲ್ಪ ಸ್ವಲ್ಪ ಮಾತಾಡ್ತೀನಿ. ನಾರ್ತಿಗಳ ಸಹವಾಸದಿಂದ‌. ಆದ್ರೆ ಓದೋಕೆ ಬರಲ್ಲ.

ಇದೆಲ್ಲಾ ನೆನಪಾಗಿದ್ದು 'ಪರಿಯೇರುಮ್ ಪೆರುಮಾಳ್' ಸಿನಿಮಾದಲ್ಲಿ ಇಂಗ್ಲಿಷ್ ಬರದ ಹೀರೋ ನೋಡಿ.

Comments

Popular posts from this blog

ಕ್ವಾರಂಟೈನ್ ಡೇಸ್..

ಸಾರ್ವಜನಿಕ ವೇದಿಕೆ ಮತ್ತು ಗೌರವ